ಸಟ್ಲೆಜ್
	ಭಾರತದ ಪಂಜಾಬ್ ರಾಜ್ಯದಲ್ಲಿ ಹರಿಯುವ ನದಿ. ಸಿಂಧೂನದಿಯ ಉಪನದಿಗಳಲ್ಲೊಂದು. ಇದು ಟಿಬೆಟ್, ಭಾರತ ಮತ್ತು ಪಾಕಿಸ್ತಾನ ಈ ಮೂರು ರಾಷ್ಟ್ರಗಳಲ್ಲಿ ಪ್ರವಹಿಸುವ ಪಂಚನದಿಗ ಳಲ್ಲಿ ಒಂದು. ಸಮುದ್ರಮಟ್ಟದಿಂದ ಸು. 4570 ಮೀ ಎತ್ತರದ ಮಾನಸಸರೋವರಕ್ಕೆ ಹತ್ತಿರವಿರುವ ಟಿಬೆಟ್‍ನ ಧರ್ಮಪಾಶದ ಬಳಿ ರೇಖಾಸ್ ಎಂಬಲ್ಲಿ ಸಟ್ಲೆಜ್‍ನ ಉಗಮ. ಅನಂತರ ಹಿಮಾಲಯ ಪರ್ವತಶ್ರೇಣಿಗೆ ಸಮಾಂನಾತರವಾಗಿ ವಾಯವ್ಯಾಭಿಮುಖವಾಗಿ ಸು.300 ಕಿಮೀ ಹರಿಯುತ್ತದೆ. ಟಿಬೆಟ್ ಮತ್ತು ಹಿಮಾಚಲಪ್ರದೇಶದ ಗಡಿಯಲ್ಲಿ ರುವ ಲಿಯೋ ಪಾರ್ಗಿಯಲ್ ಪರ್ವತದ ಶಿಪ್ಕಿಲಾ ಕಣಿವೆ ಮೂಲಕ ಹರಿದು ಸ್ಪಿತಿ ನದಿಯನ್ನು ಸೇರುತ್ತದೆ. ಟಿಬೆಟ್‍ನ ನಾರಿಕೂರಸನ್ ಪ್ರಾಂತ್ಯದಲ್ಲಿ ಸಟ್ಲೆಜ್ 900 ಮೀ ಆಳದ ಕಂದರದಲ್ಲಿ ಹರಿಯುವುದು. ಈ ಕಂದರವನ್ನು ಅಮೆರಿಕದ ಕಾಲೊರಾಡೋ ನದಿ ಕಣಿವೆಗೆ ಹೋಲಿಸಲಾಗಿದೆ. ಈ ನದಿ ಮಹಾಕಂದರ ಸೇರುವ ಮೊದಲು ಇದರ ಎಡದಂಡೆಯಲ್ಲಿ ಕೈಲಾಸ ಪ್ರಸ್ಥಭೂಮಿ ಮತ್ತು ಬಲದಂಡೆಯಲ್ಲಿ ಮೈನರಂಗ ಪರ್ವತ ಶ್ರೇಣಿ ಇದೆ. ಅನಂತರ ನಾರಿಕೂರಸನ್ ಕಂದರದಿಂದ 60 ಕಿಮೀ ದೂರದಲ್ಲಿರುವ ಬಾಸ್ರಾ ನದಿಯನ್ನು ಕೂಡಿಕೊಳ್ಳುತ್ತದೆ. ಅತ್ಯಂತ ಸುಂದರ ಕಣಿವೆ ಎನಿಸಿದ ಹಿಮಾಲಯದ ಸಾಂಗ್ಲ ಕಣಿವೆಯಲ್ಲಿ ಬಾಸ್ರಾ ನದಿ ಪ್ರವಹಿಸುವುದು. ಸಟ್ಲೆಜ್ ಅನೇಕ ಉಪನದಿಗಳನ್ನು ಕೂಡಿಕೊಂಡು ಒಂದು ಮಹಾ ಹಿಮನದಿಯಾಗಿ ಪ್ರವಹಿಸುತ್ತದೆ. ಕೊರಚಮ್ ಬಳಿ ರಭಸವಾಗಿ ಹರಿಯುವ ಸಟ್ಲೆಜ್ ತನ್ನ ಪಾತ್ರದಲ್ಲಿ ಅಡ್ಡಬರುವ ಶಿಲಾಚೂರುಗಳನ್ನು ಮಣ್ಣು ಸಹಿತ ಕೊಚ್ಚಿಕೊಂಡು ಹೋಗುವುದರಿಂದ ಉಂಟಾಗುವ ಆಳವಾದ ಕಮರಿಯಲ್ಲಿ ಸು. 4 ಕಿಮೀ ಹರಿಯುತ್ತದೆ. ಈ ಸ್ಥಳದಲ್ಲೆ ನಾದ್ಪ ಜಾಕ್ರಿ ಜಲವಿದ್ಯುದುತ್ಪಾದನಾ ಕೇಂದ್ರವಿದೆ.

	ಸಟ್ಲೆಜ್ ನದಿಯ ಒಟ್ಟು ಹರಿವಿನ ದೂರ 1450 ಕಿಮೀ. ಭಾರತದಲ್ಲೇ ಸು. 1050 ಕಿಮೀ ಉದ್ದ ಹರಿವುಳ್ಳದ್ದಾಗಿದ್ದು ಹರಿಕೆ ಎಂಬಲ್ಲಿ ಬಿಯಾಸ್ ನದಿಯನ್ನು ಕೂಡಿಕೊಳ್ಳುತ್ತದೆ. ಈ ನದಿ ಸ್ಪಿತಿ, ಗಂಬಾರ್ ನಾಲಾ, ಸೋನಾ ನಾಲಾ, ಸಿರ್ಸಾ ನಾಲಾ, ವೈಟ್ ಬೈನ್, ಬ್ಲಾಕ್ ಬೈನ್, ಬಿಯಾಸ್ ಮತ್ತು ರೂಹಿ ಎಂಬ ಉಪನದಿಗಳ ಜಾಲವನ್ನು ಹೊಂದಿದೆ.

	ಈ ನದಿಯನ್ನು ವೇದಗಳ ಕಾಲದಲ್ಲಿ ಸಾತ್ರುದಿ ಎಂದೂ ಸಂಸ್ಕøತದಲ್ಲಿ ಸಾತ್ರದು ಎಂದೂ ಕರೆಯಲಾಗಿದೆ. ಸಟ್ಲೆಜ್ ಕಣಿವೆ ಮಾರ್ಗವನ್ನು ಬಿಟ್ಟು ಪಂಜಾಬಿನ ಹೊಶಿಯಾರ್ ಎಂಬಲ್ಲಿ ಮೈದಾನವನ್ನು ಪ್ರವೇಶಿಸು ತ್ತದೆ. ಇದಕ್ಕೂ ಮೊದಲು ನೈನಾದೇವಿದರ್ ಕಂದರದಲ್ಲಿ ಹರಿಯುವ ನದಿಗೆ ಪ್ರಸಿದ್ಧವಾದ ಭಾಕ್ರಾ ಅಣೆಕಟ್ಟೆಯನ್ನು ಕಟ್ಟಲಾಗಿದೆ (ನೋಡಿ: ಭಾಕ್ರಾ-ನಾಂಗಲ್ ನದೀ ಕಣಿವೆ ಯೋಜನೆ). ಇದು 226 ಮೀ ಎತ್ತರ, 518 ಮೀ ಉದ್ದವಾಗಿದ್ದು ಭಾರತದಲ್ಲೇ ಎತ್ತರವಾದ ಅಣೆಕಟ್ಟೆ. ಈ ಜಲಾಶಯಕ್ಕೆ ಗೋವಿಂದಸಾಗರ ಎಂಬ ಹೆಸರೂ ಇದೆ.   

	ಸಟ್ಲೆಜ್ ನದಿ ಜಲಶಕ್ತಿಯನ್ನು ನಾಲ್ಕು ಜಲವಿದ್ಯುದುತ್ಪಾದನಾ ಕೇಂದ್ರಗಳ ಮೂಲಕ ವಾರ್ಷಿಕವಾಗಿ ಸು. 1204 ಮೆಗಾವ್ಯಾಟ್ ವಿದ್ಯುಚ್ಛಕ್ತಿ ಯನ್ನು ಉತ್ಪಾದಿಸಲು ಬಳಸಿಕೊಳ್ಳಲಾಗುತ್ತಿದೆ. ಇವುಗಳಲ್ಲಿ 800 ಮೆಗಾವ್ಯಾಟ್ ಶಕ್ತಿ ಉತ್ಪಾದನಾ ಕೇಂದ್ರ ಕಾಲ್ಟೋಮ್ ಯೋಜನೆಯಡಿ ನಾಲ್ಕು ಘಟಕಗಳಿವೆ. ಮತ್ತೊಂದು ನಾದ್ಪ ಭಾಕ್ರಾ ಯೋಜನೆ 1500 ಮೆಗಾವ್ಯಾಟ್ ಶಕ್ತಿ ಸಾಮಥ್ರ್ಯ ಹೊಂದಿದೆ. ಇವುಗಳಲ್ಲಿ ಇಂದಿರಾಗಾಂಧಿ ಜಲವಿದ್ಯುತ್ ಕೇಂದ್ರ ಪ್ರಮುಖವಾದದ್ದು. ಈ ಕೇಂದ್ರಗಳಿಂದ ರಾಜಸ್ತಾನ ಮತ್ತು ದೆಹಲಿ ರಾಜ್ಯಗಳಿಗೆ ವಿದ್ಯುತ್ ಒದಗಿಸಲಾಗುತ್ತಿದೆ. ಅನೇಕ ನಗರಗಳಿಗೆ ಕುಡಿಯುವ ನೀರನ್ನು ಒದಗಿಸಲೂ ಪಂಜಾಬ್, ರಾಜಸ್ತಾನ ರಾಜ್ಯಗಳ ವ್ಯವಸಾಯಕ್ಕೆ ವಿದ್ಯುತ್ ಒದಗಿಸಿ ಆರ್ಥಿಕ ಅಭಿವೃದ್ಧಿಗೂ ಪೂರಕವಾಗಿದೆ.

	ಸು.120 ಕಿಮೀ ದೂರ ಫಿರೋಜ್‍ಪುರ್‍ನಿಂದ ಪಜಲ್ಕಾವರೆಗೆ  ಪಾಕಿಸ್ತಾನ ಮತ್ತು ಭಾರತದ ಗಡಿಗಳಲ್ಲಿ ಹರಿದು ಮುಂದೆ ರಾವಿ, ಚೀನಾಬ್ ಮತ್ತು ಝೀಲಮ್ ನದಿಗಳನ್ನು ಕೂಡಿಕೊಂಡು 90 ಕಿಮೀ ಪ್ರವಹಿಸಿ ಸಿಂಧೂ ನದಿಯನ್ನು ಪಾಕಿಸ್ತಾನದ ಮೈಥಾನ್‍ಕೂಲ್ ಬಳಿ ಸೇರಿಕೊಳ್ಳುತ್ತದೆ. ಭಾರತದ ಗಡಿಯೂ ಸೇರಿದಂತೆ ಪಾಕಿಸ್ತಾನದಲ್ಲಿ ಸು. 500 ಕಿಮೀ ಹರಿಯುತ್ತದೆ. ಇದರಲ್ಲಿ ದಿಪಾಲ್‍ಪುರ್ ಅತ್ಯಂತ ಪ್ರಮುಖವಾದ ಕಾಲುವೆ. ಸಟ್ಲೆಜ್ ನದಿಯ ಸರಾಸರಿ ಹರಿವು ರೂಪನಗರ ಬಳಿ ಸು. 16660 ದಶಲಕ್ಷ ಕ್ಯೂಸೆಕ್ಸ್ ಮೀಟರ್‍ನ ಸಾಮಥ್ರ್ಯವನ್ನು ಹೊಂದಿದೆ. ಸಿಂಧೂ ನದಿನೀರಿನ ಪ್ರಾಧಿಕಾರ ಈಗಿನ ಸೂಲಮಂಕಿಯ ಬಳಿ ಸಟ್ಲೆಜ್ ನದಿಯ ನೀರಿನ ಹರಿವಿನ ಪ್ರಮಾಣವನ್ನು ದಾಖಲಿಸುತ್ತದೆ.		
			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

		(ಎಮ್.ಡಿ.)